ದೇವನಾಗರಿ ಲಿಪಿ -
ಆಧುನಿಕ ಲಿಪಿಶಾಸ್ತ್ರದ ಪ್ರಕಾರ ಪ್ರಚಲಿತವಿರುವ ಎಲ್ಲ ಉತ್ತರ ಭಾರತದ ಲಿಪಿಗಳಿಗೆ ಹಾಗೂ ಬಹಳಷ್ಟು ದಕ್ಷಿಣ ಭಾರತದ ಲಿಪಿಗಳಿಗೆಲ್ಲ ಮೂಲವೆನ್ನಲಾದ ಲಿಪಿ. ಈಗಲೂ ಸಂಸ್ಕøತ. ಮರಾಠಿ, ಹಿಂದೀ ಮುಂತಾದ ಭಾಷೆಗಳಿಗೆಲ್ಲ ಇದೇ ಲಿಪಿ ಇರುವುದಂತೂ ಸರ್ವವಿಧಿತ. ಮಿಕ್ಕ ಪಂಜಾಬೀ, ಬಂಗಾಳೀ, ಅಸ್ಸಾಮಿ, ಗುಜರಾತಿ ಮುಂತಾದ ಲಿಪಿಗಳೂ ಕರ್ನಾಟಕದಲ್ಲಿ ಕನ್ನಡ, ಗ್ರಂಥಾಕ್ಷರ, ನಂದಿನಾಗರ ಮುಂತಾದ ಕೈಬರೆಹದ ಲಿಪಿಗಳೂ ದೇವನಾಗರೀಜನ್ಯ ಇಲ್ಲವೆ ದೇವನಾಗರಿಯಿಂದ ಪ್ರಭಾವಿತವಾದವೇ.

ಭಾರತೀಯ ಲಿಪಿಗಳ ವಿಕಾಸ ಕ್ರಮದಲ್ಲಿ ದೇವನಾಗರಿಗೂ ಮೂಲವಾಗಿ ಮಾತೃ ಸ್ಥಾನದಲ್ಲಿರುವ ಲಿಪಿಯೆಂದರೆ ಬ್ರಾಹ್ಮೀ. ಕ್ರಿಸ್ತಪೂರ್ವದ ಅಶೋಕ ಶಾಸನಗಳ ಲಿಪಿಯೇ ಇದು. ಆದರೆ ಮುಂದೆ ಇದೇ ಪರಿವರ್ತನೆ ಹೊಂದುತ್ತ ಕನಿಷ್ಕರು ಹಾಗೂ ಗುಪ್ತರ ಕಾಲಗಳಲ್ಲಿ ಪರಿಷ್ಕøತವಾಗಿ ಕ್ರಿ. ಶ. 7ನೆಯ ಶತಮಾನದ ವೇಳೆಗೆ ಬೇರೊಂದು ಲಿಪಿಯೇ ಎನಿಸುವಂತಾಗಿ ನಾಗರಿ ಎಂಬ ನಾಮಾಂಕಿತವನ್ನು ಪಡೆದಂತೆ ಕಾಣುತ್ತದೆ. ಇದು ಮುಂದೆಯೂ ರೂಪಾಂತರಗಳನ್ನು ಪಡೆಯುತ್ತ ಸಾಗಿ ಕ್ರಿ. ಶ. 800ರ ವೇಳೆಗೆ ದೇವನಾಗರಿಯ ಪೂರ್ಣರೂಪವನ್ನು ಮೈದಾಳಿತೆಂದು ತಜ್ಞರ ಅಭಿಪ್ರಾಯ. ಅಲ್ಲಿಂದಾಚೆಗೂ ಪರಿವರ್ತನೆಗಳು ಬಂದುವಾದರೂ ಅವು ಲಿಪ್ಯಂ ತರವೆನಿಸುವಷ್ಟು ಇರಲಿಲ್ಲ. ಇವುಗಳಲ್ಲಿ 10ನೆಯ ಶತಮಾನದಿಂದಾಚೆಗೆ ಉತ್ತರ ಭಾರತದಲ್ಲಿ ಕಾಣುವ ನಾಗರಿಕ ದೇವನಾಗರಿಯೆಂದೂ ದಕ್ಷಿಣ ಭಾರತದಲ್ಲಿ ಕಾಣುವ ನಾಗರಿಗೆ ನಂದಿನಾಗರಿಯೆಂದೂ ವ್ಯವಹರಿಸುತ್ತಾರೆ. ನಾಗಶಿಲ್ಪ, ಶಿಖರಗಳ ನಾಗರೀ ಶಿಖರ ಇತ್ಯಾದಿಗಳಂತೆ ನಾಗರೀ ಲಿಪಿಯೆಂಬುದು ಹಿಂದೆ ಸುಪ್ರಸಿದ್ಧ ಸಂಸ್ಕøತಿ ಕೇಂದ್ರ ನಗರವಾದ ಪಾಟಲೀಪುತ್ರಕ್ಕೆ ಅನ್ವಯಿಸಬಹುದೆಂದೂ ದೇವ ಎನ್ನುವುದು ಎರಡನೆಯ ಚಂದ್ರಗುಪ್ತ ವಿಕ್ರಮಾದಿತ್ಯನದ್ಯೋತಕವೆಂದೂ ವಿ.ಎಸ್. ಅಗ್ರವಾಲಾ ಊಹಿಸುತ್ತಾರೆ.										 (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ